ಭಾಷೆ
ಹವ್ಯಕ ಕನ್ನಡ

ಹವ್ಯಕ ಕನ್ನಡವು, ಕನ್ನಡದ ಸಾಮಾಜಿಕ-ಪ್ರಾದೇಶಿಕ ಉಪಭಾಷೆಗಳಲ್ಲಿ ಒಂದು. ಇದು, ಹೆಚ್ಚಾಗಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿಯೂ ಅಂತೆಯೇ ಕೇರಳದ ಕೆಲವು ಭಾಗಗಳಲ್ಲಿಯೂ ಹವ್ಯಕಕನ್ನಡದ ಭಾಷಿಕರನ್ನು ಕಾಣಬಹುದು. ಈ ಪ್ರದೇಶಗಳಲ್ಲಿ ವಾಸಮಾಡುವ ಬ್ರಾಹ್ಮಣರ ಉಪಪಂಗಡಗಳಲ್ಲಿ ಒಂದು ಈ ಉಪಭಾಷೆಯನ್ನು ಬಳಸುತ್ತದೆ. ತಮ್ಮ ಜೀವನೋಪಾಯವಾಗಿ ಬೇಸಾಯವನ್ನು ಆರಿಸಿಕೊಂಡಿರುವುದರಿಂದ ಇವರು ಬ್ರಾಹ್ಮಣರಲ್ಲಿಯೂ ವಿಶಿಷ್ಟವಾದ ಹಿನ್ನೆಲೆಯನ್ನು ಪಡೆದಿದ್ದಾರೆ. ಈಗ ಅವರು ಉದ್ಯೋಗನಿಮಿತ್ತ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಹರಡಿಕೊಂಡಿದ್ದಾರೆ. ಹವ್ಯಕ ಕನ್ನಡವು ಅನೇಕ ವಿಶೇಷ ಲಕ್ಷಣಗಳನ್ನು ಹೊಂದಿರುವುದರಿಂದ ಇತರ ಕನ್ನಡಿಗರಿಗೆ ಅದನ್ನು ಅರ್ಥಮಾಡಿಕೊಳ್ಳುವುದೂ ಕಷ್ಟ. ಿದನ್ನು ಹವಿಗನ್ನಡವೆಂದೂ ಕರೆಯಲಾಗಿದೆ. ಈಚಿನ ವರ್ಷಗಳಲ್ಲಿ ಈ ಉಪಭಾಷೆಯು ಭಾಷಾಶಾಸ್ತ್ರಜ್ಞರ ಗಮನವನ್ನು ಸೆಳೆದಿದೆ. ಏಕೆಂದರೆ, ಇದು ಪ್ರಾಚೀನ ಕನ್ನಡದ ಹಲವು ಅಂಶಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆಯೆಂಬ ಸಂಗತಿಯನ್ನು ಬಹಳ ಕುತೂಹಲದಿಂದ ಗಮನಿಸಲಾಗಿದೆ. ಇತರ ಕನ್ನಡ ಭಾಷೆಗಳು ಅಂತಹ ರೂಪಗಳನ್ನು ಕಳೆದುಕೊಂಡು, ಶತಮಾನಗಳೇ ಕಳೆದಿವೆ. ಅಷ್ಟೇ ಅಲ್ಲ, ಹವ್ಯಕ ಕನ್ನಡದಲ್ಲಿ ಇಂದಿಗೂ ಅನ್ವಯದಲ್ಲಿರುವ ಅನೇಕ ಧ್ವನಿರಚನೆಯ ನಿಯಮಗಳು ಮತ್ತು ಪದರಚನೆಯ ನಿಯಮಗಳು ಕೂಡ ಪ್ರಾಚೀನ ಕನ್ನಡದ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆಂದು ವಿದ್ವಾಂಸರು ಊಹಿಸಿದ್ದಾರೆ.

ಕನ್ನಡ ಭಾಷೆಯ ಉತ್ತರ-ದಕ್ಷಿಣ ವಿಭಜನೆಯನ್ನು ವಿದ್ವಾಂಸರು ಮೊದಲಿನಿಂದಲೂ ಗಮನಿಸಿದ್ದಾರೆ, ಒಪ್ಪಿಕೊಂಡಿದ್ದಾರೆ. ಆದರೆ, ಡಿ.ಎನ್. ಶಂಕರ ಭಟ್ ಮತ್ತು ಅನೇಕ ಇತರ ವಿದ್ವಾಂಸರು, ಈ ವಿಭಜನೆಗಿಂತ ಸಾಕಷ್ಟು ಮುಂಚಿತವಾಗಿಯೇ ಕನ್ನಡದಲ್ಲಿ ಪೂರ್ವ-ಪಶ್ಚಿಮ ವಿಭಜನೆಯು ನಡೆಯಿತೆಂಬ ವಾದವನ್ನು ಪ್ರಬಲವಾದ ಆಧಾರಗಳೊಂದಿಗೆ ಮಂಡಿಸಿದ್ದಾರೆ. ಈ ವಿದ್ವಾಂಸರು ಕನ್ನಡದ ಉಪಭಾಷಾ ಅಧ್ಯಯನಗಳಲ್ಲಿ ಈ ಸಂಗತಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ಈ ವಿಭಜನೆಯು 1500 ವರ್ಷಗಳಿಗೂ ಹಿಂದೆ, ಹಳಗನ್ನಡ ಭಾಷೆಯು ರೂಪುತಳೆಯುವುದಕ್ಕಿಂತಲೂ ಮುಂಚಿತವಾಗಿ ನಡೆದಿದೆಯೆಂದು ಈ ಬಲ್ಲಿದರ ಅನಿಸಿಕೆ. ಇದರ ಪರಿಣಾಮವಾಗಿ ಕರಾವಳಿ ಕನ್ನಡದ ಉಪಭಾಷೆಗಳಾದ ಹವ್ಯಕ ಕನ್ನಡ, ಗೌಡ ಕನ್ನಡ, ಹಾಲಕ್ಕಿ ಕನ್ನಡ ಮತ್ತು ಕುಂಬಾರ ಕನ್ನಡಗಳು ಖಂಡಿತವಾಗಿಯೂ ಬಹಳ ಹಳೆಯ ರೂಪಗಳನ್ನು ಕಾಪಾಡಿಕೊಂಡಿವೆ. ಈ ರೂಪಗಳು ಕನ್ನಡದ ಇತರ ಉಪಭಾಷೆಗಳಿಂದ ಕಾಣೆಯಾಗಿ ಬಹಳ ಕಾಲ ಕಳೆದಿದೆ. ಹೀಗೆ ಉಳಿದುಕೊಂಡಿರುವ ಪ್ರಾಚೀನರೂಪಗಳನ್ನು ಕನ್ನಡದ ಬಹು ಹಳೆಯ ಶಾಸನಗಳು ಮತ್ತು ಸಾಹಿತ್ಯಕೃತಿಗಳಲ್ಲಿ ಕಂಡುಬರುವ ರೂಪಗಳೊಂದಿಗೆ ಹೋಲಿಸಿದಾಗ ಅನೇಕ ಸಾಮ್ಯಗಳು ಕಂಡುಬಂದಿವೆ. ಹವ್ಯಕ ಕನ್ನಡದ ಅಂತಹ ಕೆಲವು ಲಕ್ಷಣಗಳನ್ನು ಇನ್ನು ಮುಂದೆ ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ:

  1. ಮಧ್ಯಸ್ವರವೊಂದರ ಪಕ್ಕದಲ್ಲಿ ಇನ್ನೊಂದು ಉನ್ನತ ಸ್ವರ ಬಂದಾಗ, ಆ ಮಧ್ಯಸ್ವರವು ಉನ್ನತಸ್ವರವಾಗಿ ಬದಲಾವಣೆಯಾಗುವುದು. ಈ ಬದಲಾವಣೆಯನ್ನು ಕರ್ನಾಟಕದ ಒಳನಾಡಿನ ಉಪಭಾಷೆಗಳಲ್ಲಿ ಆರು-ಏಳನೆಯ ಶತಮಾನಗಳಷ್ಟು ಹಿಂದೆಯೇ ಗಮನಿಸಬಹುದು. ಆದರೆ, ಐದನೆಯ ಶತಮಾನದ ಶಾಸನಗಳಲ್ಲಿ ಮಧ್ಯಸ್ವರವು ತನ್ನ ಮೂಲರೂಪದಲ್ಲಿಯೇ ಉಳಿದಿದೆ. ಹವ್ಯಕ ಕನ್ನಡ ಹಾಗೂ ಕರಾವಳಿ ಕನ್ನಡದ ಿತರ ಉಪಭಾಷೆಗಳಲ್ಲಿ ಈ ಸನ್ನಿವೇಶವನ್ನು ಇಂದಿಗೂ ಕಾಣಬಹುದು. ಎಂದರೆ, ಅಲ್ಲಿ ಮಧ್ಯಸ್ವರವು ತನ್ನ ಮೂಲರೂಪವನ್ನು ಉಳಿಸಿಕೊಳ್ಳುತ್ತದೆ.
  2. ಉದಾಹರಣೆ:

    ಬೆಳಿ, ಕೆವಿ, ಬೆಸಿ, ಒಳಿ, ತೊದಿ ಮತ್ತು ತೊಳು ಎಂಬ ಪ್ರಾಚೀನ ರೂಪಗಳು ಒಳನಾಡಿನಲ್ಲಿ ಬಿಳಿ, ಕಿವಿ, ಬಿಸಿ, ಉಳಿ, ತುದಿ ಮತ್ತು ತೊಳಿ ಎಂದು ಬದಲಾಗಿವೆ. ಹವ್ಯಕ ಕನ್ನಡದಲ್ಲಿ ಇಂದಿಗೂ ಮೂಲರೂಪಗಳೇ ಉಳಿದಿವೆ.

  3. ಒಳನಾಡಿನ ಕನ್ನಡದಲ್ಲಿ, ಮೂರು ಅಕ್ಷರಗಳಿರುವ ಪದಗಳಲ್ಲಿ ಎರಡನೆಯ ಸ್ವರವು ಬಿಟ್ಟುಹೋಗುತ್ತದೆ.(ಆಡುಮಾತಿನಲ್ಲಿ) ಆದರೆ, ಹವ್ಯಕ ಕನ್ನಡವು ಸ್ವರವನ್ನು ಉಳಿಸಿಕೊಂಡಿದೆ. ಉದಾಹರಣೆ: ಹಗಲು, ಅಡಕೆ, ಅಂಗಡಿ ಮತ್ತು ಬಾಗಿಲು ಎಂಬ ಪದಗಳು, ಒಳನಾಡಿನ ಆಡುಮಾತಿನಲ್ಲಿ ಹಗ್ಲು, ಅಡ್ಕೆ, ಅಂಗ್ಡಿ ಮತ್ತು ಬಾಗ್ಲು ಎಂದು ಬದಲಾಗುತ್ತವೆ. ಕರಾವಳಿಯ ಉಪಭಾಷೆಗಳಲ್ಲಿ ಹೀಗೆ ಆಗುವುದಿಲ್ಲ

  4. ದೀರ್ಘಸ್ವರದ ನಂತರ ಬರುವ ಅಥವಾ ಮೂರು ಅಕ್ಷರಗಳ ಪದದಲ್ಲಿ ಎರಡನೆಯ ಸ್ವರದ ನಂತರ ಬರುವ ಅನುನಾಸಿಕಗಳು ಒಳನಾಡಿನಲ್ಲಿ ಬಿಟ್ಟುಹೋಗುತ್ತವೆ. ಹವ್ಯಕ ಕನ್ನಡದಲ್ಲಿ ಅವು ಹಾಗೆಯೇ ಉಳಿಯುತ್ತವೆ.

    ಉದಾಹರಣೆ:

    ಹಳಗನ್ನಡ

    ಹವ್ಯಕ ಕನ್ನಡ

    ಹೊಸಗನ್ನಡ

    ದಾಂಟು

    ದಾಂಟು

    ದಾಟು

    ನಾಂಟು

    ನಾಂಟು

    ನಾಟು

    ಕಲಂಕು

    ಕಲಂಕು

    ಕಲಕು

    ಕಾಡಿಂಗೆ

    ಕಾಡಿಂಗೆ

    ಕಾಡಿಗೆ

    ಮರಂಗಳ

    ಮರಂಗೊ

    ಮರಗಳ್

  5. ವ್ಯಾಕರಣದ ನೆಲೆಯಲ್ಲಿ ನೋಡಿದಾಗ, ಕರಾವಳಿಯ ಪ್ರಭೇದಗಳು ನಿಷೇಧಾತ್ಮಕ ಕ್ರಿಯಾಪ್ರತ್ಯಯ ಮತ್ತು ಭವಿಷ್ಯಕಾಲ ಸೂಚಕ ಪ್ರತ್ಯಯಗಳನ್ನು ಹಾಗೆಯೇ ಉಳಿಸಿಕೊಂಡಿರುವುದನ್ನು ನೋಡಬಹುದು. ಒಳನಾಡಿನ ಕನ್ನಡದಲ್ಲಿ ಅವು ಹೊರಟುಹೋಗಿವೆ.
  6. ಉದಾಹರಣೆ: ಹೇಳೆಂ, ಕೇಳೆಂ ಮುಂತಾದ ನಿಷೇಧಾರ್ಥ ಸೂಚಕಗಳು ಮತ್ತು ಹೇಳ್ವೆ ಕೇಳ್ವೆಂ ಮುಂತಾದ ಭವಿಷ್ಯಸೂಚಕಗಳು ಹಳಗನ್ನಡ ಮತ್ತು ಹವ್ಯಕ ಕನ್ನಡಗಳಲ್ಲಿ ಕಂಡುಬರುತ್ತವೆ.

  7. ಉತ್ತಮಪುರುಷ ಬಹುವಚನದಲ್ಲಿ ಬರುವ ಸಮಾವೇಶಕ ಹಾಗೂ ಅಸಮಾವೇಶಕ ರೂಪಗಳು, ಹಳಗನ್ನಡದಲ್ಲಿಯಾಗಲೀ ಅಥವಾ ಒಳನಾಡಿನ ಸಮಕಾಲೀನ ಉಪಭಾಷೆಗಳಲ್ಲಿ ಇಲ್ಲ. ಆದರೆ, ಕರಾವಳಿಯ ಕೆಲವು ಉಪಭಾಷೆಗಳಲ್ಲಿ ಇಂದಿಗೂ ಅವುಗಳನ್ನು ಕಾಣಬಹುದು. ಉದಾಹರಣೆಗೆ ಹವ್ಯಕ ಕನ್ನಡದಲ್ಲಿ ಎಂಗೊ ಎಂದರೆ, ಅಸಮಾವೇಶಕ ಮತ್ತು ನಾವು ಎಂದರೆ ಸಮಾವೇಶಕ. ತೆಲುಗಿನಲ್ಲಿರುವ ಮೇಮು ಮತ್ತುಮನಮು ಎಂಬ ರೂಪಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಎದುರಿಗಿರುವವರನ್ನೂ ಸೇರಿಸಿಕೊಂಡು ಬಳಸುವ ಬಹುವಚನವು ಸಮಾವೇಶಕವಾದರೆ, ಅವರನ್ನು ಬಿಟ್ಟು ಬಳಸುವ ಬಹುವಚನವು ಅಸಮಾವೇಶಕ. ಹವ್ಯಕ ಕನ್ನಡದಲ್ಲಿ ಇಂದಿಗೂ ಹೆಣ್ಣುಮಕ್ಕಳನ್ನು ಕುರಿತು ಹೇಳುವಾಗ ನಪುಂಸಕಲಿಂಗದ ರೂಪಗಳನ್ನು ಬಳಸುವ ರೂಢಿಯಿದೆ. ಇದಕ್ಕೆ ಸಮಾನಾಂತರವಾದ ಸನ್ನಿವೇಶವನ್ನು ತೆಲುಗಿನಲ್ಲಿ ಕಾಣಬಹುದು.

ಸಹಜವಾಗಿಯೇ ಶಬ್ದಕೋಶವು ಹೆಚ್ಚು ಚಂಚಲವಾದುದು. ಅನೇಕ ಪ್ರಾಚೀನ ಕನ್ನಡ ಪದಗಳು ಹವ್ಯಕರ ಉಪಭಾಷೆಯಿಂದಲೂ ಬಿಟ್ಟುಹೋಗಿವೆ, ಹೋಗುತ್ತಿವೆ. ಆದರೂ ಕಿಚ್ಚು, ಅವುಂಕು, ಆನು ಮುಂತಾದ ರೂಪಗಳು ಅನೇಕ ಶತಮಾನಗಳಿಂದ ಉಳಿದುಕೊಂಡು ಬಂದಿವೆ. ಹವ್ಯಕ ಕನ್ನಡ ಮತ್ತು ಕರಾವಳಿಯ ಇತರ ಉಪಭಾಷೆಗಳನ್ನು ಇನ್ನೂ ವಿವರವಾಗಿ ಅಭ್ಯಾಸಮಾಡಿದಾಗ ಮೂಲಕನ್ನಡದ ರೂಪಗಳ ಪುನಾರಚನೆಗೆ ಬಹಳ ಸಹಾಯವಾಗಬಹುದು.

 

( ಟಿಪ್ಪಣಿಯು ಕ್ಷೇತ್ರದಲ್ಲಿ ಮೌಲಿಕವಾದ ಕೆಲಸಮಾಡಿರುವ ಡಿ.ಎನ್. ಶಂಕರ ಭಟ್ ಅವರ ಸಂಶೋಧನೆಗಳಿಗೆ ಬಹಳವಾಗಿ ಋಣಿಯಾಗಿದೆ. ಕೆಳಗೆ ಸೂಚಿಸಿರುವ ಅವರ ಪುಸ್ತಕಗಳು ಈ ವಿಷಯವನ್ನು ಇನ್ನಷ್ಟು ವಿರವಾಗಿ ಚರ್ಚಿಸಿವೆ.)

 

ಮುಂದಿನ ಓದು ಮತ್ತು ಲಿಂಕುಗಳು:

    1. ‘An outline grammar of Havyaka’ By Shankara Bhat D.N., 1971, Linguistic Survey of India series, Volume 5, published by Deccan College Postgraduate and research Institute, Poona.
    2. ‘The Havyaka dialect of North Kanara’ by Krishna Ganesh Shastry, 1971, Karnatak University, Dharwar.
    3. ‘Clause structure of northern Havyaka Kannada’ (Dravidian): Tangemic Analysis’ By Helen E. Ullrich, 1988, University of Michigan.
    4. ‘The landscape of language: Issues in Kannada linguistics’ by K.V. Tirumalesh, 2000, Allied Publishers.
    5. ‘Havyaka Kannada: Modality and negation’ by Johan Van Der Auwera, Indian Linguistics, Volume 17, 2000.
    6. ‘Havyaka Dialect’, by M.Mariyappa Bhat, 1969, Annals of Oriental Research, Madras.
    7. ‘A Descriptive Analysis of Havyaka Kannada’ (Puttur and Suliya region) by C.B. Bhat and H.M. Nayak
    8. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ’, ಡಿ.ಎನ್. ಶಂಕರ ಭಟ್, 1995, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮುಖಪುಟ / ಭಾಷೆ